ಮಹ್ದಿ
ಧರ್ಮ ಸಂಸ್ಥಾಪಕ. ಇಸ್ಲಾಮೀ ಸಾಮ್ರಾಜ್ಯಪತನ, ಇಸ್ಲಾಮೀ ಧರ್ಮಕ್ಕೆ ಅಪಾಯ. ಇಸ್ಲಾಮೀ ಧರ್ಮದ ಮೇಲಿನ ಪ್ರೀತಿ ದಾನದಯೆಗಳು ಇಲ್ಲವಾಗಿ ಅತ್ಯಾಚಾರ, ಸೆರೆಗುಡುಕತನ, ಸ್ತ್ರೀಯರ ಹೆಚ್ಚಳ ಮುಂತಾದ ವಿಪ್ಲವಾತಿ ಶಯಗಳುಂಟಾದಾಗ ದಾರಿ ತೋರಲು ಇಮಾಮ್ ಮಹ್ದಿ ಉದಯಿಸುತ್ತಾನೆ ಎನ್ನುವ ನಂಬಿಕೆ ಮುಸ್ಲಿಮರಲ್ಲಿದೆ. ಹಾಗೆ ಉದಯಿಸಿದ ಇಮಾಮ್ ಮಹ್ದಿಯನ್ನು ಗುರುತಿಸುವ ಲಕ್ಷಣಗಳು ಹಜರತ್ ಮುಹಮ್ಮದ್ ಪೈಗಂಬರರ ಹದೀಸ್‍ಗಳ (ಉಪನ್ಯಾಸ) ಸಂಗ್ರಹಗಳಾದ ಬುಖ್ಹಾರೀ ಮುಸ್ಲಿಮ್, ಇಬ್ನೆಮಾಜಾ, ತಿರ್ ಮಿಜೀ, ಅಬೂದಾಊದ್, ನಿಸಾ ಈ ಗ್ರಂಥಗಳಲ್ಲಿಯೂ ಈ ಗ್ರಂಥಗಳ ತಾತ್ಪರ್ಯ ಸಂಗ್ರಹವಾದ ದಾರ್‍ಖುತನೀ ಗ್ರಂಥದಲ್ಲಿಯ ಹೇಳಿದೆ.

ಷಿಯಾ ಪಂಥದವರ ಅಲಿ ಪರಂಪರೆಯ ಕೊನೆಯ ಇಮಾಮ್. 874ರ ಸರಿ ಸುಮಾರು ಅದೃಶ್ಯರಾಗಿದ್ದಾರೆಂದು ಅವರೇ ಉಕ್ತಸಮಯ ಸನ್ನಿಹಿತವಾದಾಗ ಪ್ರಕಟಗೊಳ್ಳುವ ಮಹ್ದಿ ಎಂದೂ ನಂಬುತ್ತಾರೆ.

ಮುಸಲ್ಮಾನರಲ್ಲಿ ಬಹುಸಂಖ್ಯಾತರಾದ ಸುಮಾರು ನೂರಕ್ಕೆ ತೊಂಬತ್ತೊಂದರಷ್ಟಿರುವ ಸುನ್ನೀ ಪಂಥದವರು ಮಹ್ದಿ ಆಗಲೇ ಅವತರಿಸಿದ್ದಾನೆ ಮತ್ತು ಅದೃಶ್ಯನಾಗಿದ್ದಾನೆ ಎನ್ನುವುದನ್ನು ಒಪ್ಪುವುದಿಲ್ಲ. ಮಹ್ದಿ ಅವತರಿಸಿದ್ದಲ್ಲಿ ದೇವದೂತನಾದ ಆತ ಅಡಗಿರುತ್ತಿರಲಿಲ್ಲ ಎನ್ನುವುದು ಇವರ ವಾದ. ಮಹ್ದಿ ಬರುವುದು ನಿಜವಾದರೂ ಆತ ಇನ್ನೂ ಹುಟ್ಟಿಲ್ಲ ಎನ್ನುವ ಸುನ್ನೀ ಪಂಥದವರನ್ನು ಷಿಯಾ ಪಂಥದವರು ಫೈರ್ ಮಹ್ದಿಗಳೆಂದು ಕರೆಯುತ್ತಾರೆ.

ಆಗಾಗ್ಗೆ ಪರ್ಷಿಯಾ ಮತ್ತು ಈಜಿಪ್ಟಿನಲ್ಲಿ ಮಹ್ದಿ ಎಂದು ಹೇಳಿಕೊಂಡು ನಾಯಕರು ಉದ್ಭವಿಸಿದರು. ಇವರಲ್ಲಿ ಮಹಮದ್ ಅಹಮದ್ ಮಾತ್ರ ಐತಿಹಾಸಿಕ ಪ್ರಾಮುಖ್ಯಗಳಿಸಿದ.

ಆಂಗ್ಲೋ-ಈಜಿಪ್ಟಿನ ದ್ವಿನಿಯಂತ್ರಣದಲ್ಲಿ ಸುಡಾನಿನ ಮುಸಲ್ಮಾನ ಧಾರ್ಮಿಕ ನಾಯಕ ಮಹಮದ್ ಅಹಮದ್ (1848-85) ಇಸ್ಲಾಮ್ ಧರ್ಮದ ದೈವ ಸಂಭೂತನೆಂದು 1881ರಲ್ಲಿ ಸಾರಿಕೊಂಡು ಈಜಿಪ್ಟಿನ ಸೈನ್ಯಾಡಳಿತದ ಅನಾಯಕತ್ವದಿಂದ ವಿಮೋಚನೆ ಮಾಡುತ್ತೇನೆಂದು ಖಾರಟೂಮನ್ನು ವಶಪಡಿಸಿಕೊಂಡ. ಆದರೆ ಶೀಘ್ರದಲ್ಲಿಯೇ ಮಡಿದ. ಆತನ ಅನುಯಾಯಿಗಳು ಮಹಮದಿಗಳು ಸ್ವಲ್ಪ ಕಾಲ ಮೆಕ್ಕಾದ ಧರ್ಮಯಾತ್ರೆಯ ಬದಲು ಆತನ ಸಮಾಧಿಯ ಯಾತ್ರೆಯನ್ನು ನಡೆಸಿದರು.
(ಜಿ.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ